ಬ್ರಾಡ್ಲೆ, ಫ್ರಾನ್ಸಿಸ್ ಹರ್ಬರ್ಟ್
	1846-1924. ಬ್ರಿಟಿಷ್ ತತ್ತ್ವಶಾಸ್ತ್ರಜ್ಞ, ಅಪ್ರತಿಮ ವಾದಪಟು, ಧ್ಯೇಯವಾದಿ ಪ್ರಸಿದ್ಧ ವಿಮರ್ಶಕ ಎ.ಸಿ. ಬ್ರಾಡ್ಲೆಯ ಸಹೋದರ. ಚೆಲ್ಟನ್‍ಹ್ಯಾಮ್, ಮಾರ್ಲ್‍ಬರೋ ಮತ್ತು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ. 1870ರಿಂದ ಮೆರ್ಟನ್ ಕಾಲೇಜಿನಲ್ಲಿ ಅಜೀವ ಫೆಲೋ ಆಗಿ ಸೇರಿ ಸಾಯುವ ತನಕವೂ ಅಲ್ಲಿಯೇ ಇದ್ದು ಕಾಲೇಜಿನ ಪುರೋಭಿವೃದ್ಧಿಗೆ ದುಡಿದ ಸದಾರೋಗಿಯಾದ ಈ ಬ್ರಹ್ಮಚಾರಿಗೆ ಕಾಲೇಜೇ ಸರ್ವಸ್ವವಾಗಿತ್ತು. ಸಮಕಾಲೀನ ತಾತ್ತ್ವಿಕರ ಚಿಂತನೆಯಲ್ಲಿ ಪ್ರಮುಖ ಪಾತ್ರವಹಿಸಿದ ಈತ ತನ್ನ ಜೀವಮಾನವನ್ನೇ ತಾತ್ತ್ವಿಕ ಗ್ರಂಥಗಳ ರಚನೆಗೆ ಮುಡುಪಿಟ್ಟ.

	ಬ್ರಾಡ್ಲೆಯ ತಾತ್ತ್ವಿಕ ಚಿಂತನೆ, ಸಾಮಾನ್ಯ ತಿಳಿವಕೆಯ ನಂಬಿಕೆಗೆ ಒಳಗಾಗಿರುವ ಕಾರ್ಯಕಾರಣವಾದ ದೇಶ, ಕಾಲ, ವಸ್ತು ಮತ್ತು ಗುಣ ಹಾಗೂ ತಾತ್ತ್ವಿಕ ಕಲ್ಪನೆಗಳೆಂದು ಕರೆಸಿಕೊಳ್ಳುವ ಅತ್ಮ, ದೇವರು, ಧರ್ಮ ಮುಂತಾದವನ್ನು ಬುದ್ಧಿಯ ಅಳತೆಗೋಲಿನಿಂದ ಅಳೆಯುವ ಮೂಲಕ, ಅವು ಸ್ವವಿರೋಧ ಕಲ್ಪನೆಗಳೆಂದು ತೋರಿಸುವುದರ ಮೂಲಕ ಅಲ್ಲಗಳೆಯುತ್ತದೆ. ದೇವರು ಎನ್ನುವುದು ಒಂದು ತೋರಿಕೆ. ಇದು ತೋರಿಕೆಗಳಲೆಲ್ಲ ಪ್ರಮುಖವಾದದ್ದು. ಅದರೂ ಇದು ತನ್ನ ಮೌಲ್ಯವನ್ನು ಕಳೆದು ಕೊಳ್ಳುವುದಿಲ್ಲ. ಮಾನವ ಎಲ್ಲಿಯತನಕ ಸ್ವವಿರೋಧ ಕಲ್ಪನೆಗೆಳಿಂದ ಮುಕ್ತನಾಗುವುದಿಲ್ಲವೋ ಅಲ್ಲಿಯತನಕ ದೇವರ ಕಲ್ಪನೆ ಮುಂದುವರಿಯುತ್ತದೆ ಎನ್ನುತ್ತಾನೆ.

	1914ರಲ್ಲಿ ಈತನಿಗೆ ಅರ್ಡರ್ ಆಫ್ ಮೆರಿಟ್ ಪ್ರಶಸ್ತಿ ಲಭಿಸಿತು. ಎತಿಕಲ್ ಸ್ಟಡೀಸ್ (1876): ದಿ ಪ್ರಿನ್ಸಿಪಲ್ಸ್ ಆಫ್ ಲಾಜಿಕ್ (1883): ಅಪಿಯರೆನ್ಸ್ ಅಂಡ್ ರಿಯಾಲಿಟಿ (1893); ಎಸ್ಸೇಸ್ ಅನ್ ಟ್ರೂತ್ ಅಂಡ್ ರಿಯಾಲಿಟಿ (1914)-ಇವು ಈತನ ಪ್ರಮುಖ ಗ್ರಂಥಗಳು.
(ವಿ.ಎನ್.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ